ಕೈಸರ್ ಜಾರ್ಜ್
1878-1945. ಜರ್ಮನ್ ನಾಟಕಕಾರ ಹಾಗೂ ಕಾದಂಬರಿಕಾರ. ನಾಟಕದಲ್ಲಿ ಅಭಿವ್ಯಕ್ತಿ ಪಂಥದ ಮುಂದಾಳು. ಸಾಮಾಜಿಕ ಹಾಗೂ ನೈತಿಕ ಸಮಸ್ಯೆಗಳನ್ನು ಕುರಿತು ನಗೆನಾಟಕಗಳನ್ನೂ ಗಂಭೀರ ನಾಟಕಗಳನ್ನೂ ಬರೆದ. ಕಲೆ ಮತ್ತು ವ್ಯವಹಾರ-ಎರಡೂ ದೃಷ್ಟಿಗಳಿಂದ ಇವನ ನಾಟಕಗಳು ಯಶಸ್ವಿಯಾದುವು.

ಮಾಗ್ಡೆಬರ್ಗ್‍ನಲ್ಲಿ ಶಾಲಾ ಶಿಕ್ಷಣ ಮುಗಿಸಿ, ಇಟಲಿ, ಸ್ಪೇನ್, ದಕ್ಷಿಣ ಅಮೆರಿಕಗಳಲ್ಲಿ ವಾಣಿಜ್ಯೋದ್ಯಮಿಯಾಗಿ ಈತ 3 ವರ್ಷ ಕಳೆದ. ಅರ್ಜಂಟೀನದ ಒಳನಾಡಿನಲ್ಲಿದ್ದಾಗ ಮಲೇರಿಯ ರೋಗದಿಂದ ತೊಂದರೆಪಟ್ಟು, ಅಶಕ್ತನಾಗಿ ಜರ್ಮನಿಗೆ ಹಿಂದಿರುಗಿದ. ಅನಂತರ ಚೇತರಿಸಿಕೊಂಡು ಬರೆವಣಿಗೆಯಲ್ಲಿ ಖ್ಯಾತಿಗಳಿಸಿದ.

1933ರಲ್ಲಿ ನಾಜಿûಗಳಿಂದ ತೊಂದರೆಪಟ್ಟು ಸ್ವಿಟ್ಜರ್ಲೆಂಡಿಗೆ ಓಡಿಹೋಗಿ, ಸಾಯುವವರೆಗೆ ಅಲ್ಲೇ ಇದ್ದ.
1918ರಲ್ಲಿ ಪ್ರಕಟವಾದ ರೆಕ್ಟೊರ್ ಕ್ಲೈಸ್ಟ್ ನಾಟಕದಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ದೈಹಿಕ ಶಿಕ್ಷಣ ಬೋಧಕರ ಮಧ್ಯೆ ಉಂಟಾದ ಕಲಹ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆಯಲ್ಲಿ ಪರ್ಯವಸಾನವಾಗುತ್ತದೆ. 

ಬೈಬಲ್ಲಿನ ಹಳೆಯ ಒಡಂಬಡಿಕೆಯನ್ನು ಆಧರಿಸಿ ಬರೆದ ಡೀ ಜೂಡಿಷೆ ವಿಟ್ಟೆ (ಯೆಹೂದಿ ವಿಧವೆ, 1911), ಕೋನಿಂಗ್ ಹ್ಯಾನ್ರೆ (ದೊರೆ ಹೆನ್ರಿ, 1915), ಗ್ರೀಕ್ ಕಥೆಯ ಆಧಾರದ ಯೂರೋಪ, (1915) ಇವು ಈತನ ಕೃತಿಗಳಲ್ಲಿ ಮುಖ್ಯವಾದುವು.
ಡೀ ಬ್ಯೂರ್ಗರ್ ಫಾನ್ ಕಲಾಯ್ಸ್ (ಕೆಲೆ ನಗರದ ಪೌರ 1914) ನಾಟಕದಲ್ಲಿ ನಾಯಕ ಜನರ ಒಳಿತಿಗಾಗಿ, ಅಹಿಂಸೆ, ಶಾಂತಿ ಸ್ಥಾಪನೆಗಾಗಿ, ತ್ಯಾಗ ಮಾಡುತ್ತಾನೆ.

ಫ್ರೆಂಚ್ ಚರಿತ್ರೆಕಾರ ಫ್ರಾಯ್‍ಸಾರ್ಟ್‍ನ ಚರಿತ್ರೆ ಮತ್ತು ರೋಡಿನ್‍ನ ಕೆಲೆ ನಗರದ ಪೌರರ ಪ್ರತಿಮೆಗಳು-ಇವು ಕೈಸರನ ನಾಟಕಕ್ಕೆ ಸ್ಫೂರ್ತಿ ನೀಡಿದುವು. ಫಾನ್ ಮೊರ್ಗನ್ಸ್ ಬಿಸ್ ಮಿಟರ್‍ನಾಕ್ಟ್ಸ್ (ಬೆಳಗಿನಿಂದ ಮಧ್ಯರಾತ್ರಿಯವರೆಗೆ) ಅಭಿವ್ಯಕ್ತಿವಾದದ ಸಾಮಾಜಿಕ ನಾಟಕ. 1922ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಪ್ರದರ್ಶಿಸಿದ ಈ ನಾಟಕ ಆಧುನಿಕ ಅಮೆರಿಕನ್ ನಾಟಕರಂಗದಲ್ಲಿ ನೂತನ ಶಕೆಯನ್ನು ಆರಂಭಿಸಿತು. ಹೋಲೆ ವೆಗ್ ಎರ್‍ಡೆ (ನರಕ, ದಾರಿ, ಭೂಮಿ-1919) ನಾಟಕದಲ್ಲಿ, ಮೊದಲನೆಯ ಭಾಗದಲ್ಲಿ ಶೋಷಣೆ ಮತ್ತು ದುರಾಶೆಯಿಂದ ಪೀಡಿತವಾಗಿರುವ ಇಂದಿನ ಸಮಾಜದ ಚಿತ್ರ, ಎರಡನೆಯ ಭಾಗದಲ್ಲಿ ಸಾಮಾಜಿಕ ಜವಾಬ್ದಾರಿಯ ಆರಂಭದ ಕಥೆ, ಕಡೆಯ ಭಾಗದಲ್ಲಿ ತನ್ನವರಿಗಾಗಿ ಪ್ರೀತಿ ತೋರಿಸುವುದೇ ಮಾನವನ ಗುರಿಯ ವರ್ಣನೆ ಇವೆ. ಮಾನವ ಮತ್ರ್ಯದಲ್ಲೇ ಸ್ವರ್ಗ ನಿರ್ಮಿಸಿದಾಗ ಆತ್ಮ ಪ್ರೇಮಗೀತೆ ಹಾಡುತ್ತದೆ. ಗ್ಯಾಸ್ ನಾಟಕದಲ್ಲಿ ಕೈಗಾರಿಕೆ ವ್ಯವಸ್ಥೆಯನ್ನು ಖಂಡಿಸಿ, ಯಂತ್ರದ ಪ್ರಭುತ್ವದಿಂದ ಮಾನವನ ಬಿಡುಗಡೆಯನ್ನು ಕವಿ ಬೇಡುತ್ತಾನೆ.

ಈ ನಾಟಕಗಳಲ್ಲದೆ ಎಸ್ಟ್ ಇಸ್ಟ್ ಗೆನುಂಗ್ (ಇನ್ನು ಸಾಕು-1932) ಮತ್ತು ವಿಲಾ ಆರಿಯ (ಸಿಸಿಲಿಯ ಹಳ್ಳಿ-1940) ಎಂಬ ಕಾದಂಬರಿಗಳನ್ನೂ ಈತ ಬರೆದಿದ್ದಾನೆ.								(ಟಿ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ